ಮಂಗಳೂರಿನ ಹೆಂಚುಗಳು

Blogs, View all 2 comments

ಮಂಗಳೂರಿನ ಹೆಂಚುಗಳು ಸ್ವಾತಂತ್ರ್ಯ ಪೂರ್ವದಿಂದಲೂ ಹೆಸರುವಾಸಿಯಾಗಿವೆ. ಬ್ರಿಟೀಷರೂ ಈ ಹೆಂಚಿಗೆ ಮಾರುಹೋಗಿದ್ದರು. ಮುಂಬಯಿಯ ವಿಕ್ಟೋರಿಯಾ ಟರ್ಮಿನಲ್, ಚರ್ಚ್‌ಗೇಟ್‌ಗಳಲ್ಲಿ ಬಳಸಿದ್ದು ಇದೇ ಮಂಗಳೂರಿನ ಹೆಂಚುಗಳನ್ನು. ದೇಶಾದ್ಯಂತ ಈ ಹೆಂಚು ತಿರುಗಾಡಿದ್ದಲ್ಲದೇ ಯುರೋಪ್, ಆಫ್ರಿಕಾ ಖಂಡಗಳಿಗೂ ಈ ಹೆಂಚುಗಳು ರಫ್ತಾಗುತ್ತಿದ್ದವು. 1970ರ ಹೊತ್ತಿಗೆ 43 ಹೆಂಚಿನ ಉದ್ಯಮಗಳಿದ್ದು ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತು. 1860ರಲ್ಲಿ ಉಳ್ಳಾಲ ಸೇತುವೆಯಿಂದ 100 ಮೀಟರ್ ದೂರದಲ್ಲಿ ಜರ್ಮನ್ ಮಿಶನರೀಸ್ ಬ್ಯಾಸೆಲ್ ಮಿಷನ್ ಟೈಲಿಂಗ್ ವರ್ಕ್ಸ್ ಎಂಬ ಹೆಸರಿನೊಂದಿಗೆ ಮೊದಲು ಹೆಂಚು ನಿರ್ಮಾಣ ಸಂಸ್ಥೆ ಶುರುವಾಯಿತು. ಇದಕ್ಕೂ‌ ಮೊದಲು ಭಾರತಕ್ಕೆ ಬೇಕಾದ ಹೆಂಚುಗಳನ್ನು ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾ, ಮಯನ್ಮಾರ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದರು. ಜೇಡಿಮಣ್ಣಿನ ಅಗಾಧವಾದ ನಿಕ್ಷೇಪ, ಸಾಕಷ್ಟು ಉರುವಲು, ಅಗ್ಗದ ನುರಿತ ಕಾರ್ಮಿಕರು ಸಿಗುವವರೆಗೆ ಈ ಕಾರ್ಖಾನೆ ಉತ್ತುಂಗದಲ್ಲಿತ್ತು.

ಕಾಂಕ್ರೀಟ್, ಆರ್ಸಿಸಿ ಮನೆಗಳು ಬಂದ ಮೇಲೆ ಶತಮಾನಗಳಷ್ಟು ಹಳೆಯದಾದ ಈ ಉದ್ಯಮ ಕುಸಿತ ಕಂಡಿದ್ದಂತು ಸತ್ಯ. ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರ್, ಉಳ್ಳಾಲ, ಗುರುಪುರ, ಕುದ್ರೊಳ್ಳಿ, ಎಡಪದವು, ಗಂಜಿ ಮಠ ಅಲ್ಲದೇ ಉಡುಪಿಯ ಕುಂದಾಪುರವೂ ಸೇರಿ ಇಪ್ಪತ್ತು ವರ್ಷಗಳ ಹಿಂದಷ್ಟೇ ಮೂವತ್ತಕ್ಕೂ ಅಧಿಕ ಹೆಂಚು ಕಾರ್ಖಾನೆಗಳಿದ್ದವು. ಆರ್ಸೀಸಿಗೆ ಕಟ್ಟಡಗಳು ತಿರುಗಿದ್ದಷ್ಟೇ ಅಲ್ಲದೇ ಇನ್ನೂ ಹಲವಾರು ಕಾರಣಗಳಿಂದ ಹೆಂಚಿನ ಬೇಡಿಕೆ ಮತ್ತು ತಯಾರಿಕೆಯ ಇಳಿಮುಖ ಕಂಡಿದೆ. ನದಿಯ ದಡದಲ್ಲಿ ಸಿಗುವ ಆವೆ ಮಣ್ಣಿನಲ್ಲಿ ಪ್ಲ್ಯಾಸ್ಟಿಕ್ ಮತ್ತಿತರ ತ್ಯಾಜ್ಯ ಬಂದು ಸೇರುವುದರಿಂದ, ಶುದ್ಧವಾದ ಮಣ್ಣು ಕಾರ್ಖಾನೆಗಳಿಂದ ಬಹುದೂರ ಹೋಗಿ ತರಬೇಕಾದ ಸಾರಿಗೆಯ ಸಮಸ್ಯೆಯಿಂದ, ಹೆಂಚು ಉದ್ಯಮಕ್ಕೆ ಬೇಕಾದ ಮರಗಳ‌ ಕೊರತೆಯಿಂದ, ಸೀಮೆಎಣ್ಣೆ, ಡಿಸೈಲ್, ವಿದ್ಯುತ್‌ಗಳ ಕೊರತೆಯಿಂದ, ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಮಿಕ ಸಂಘಟನೆ, ಕಾರ್ಮಿಕರು, ಉದ್ಯಮಿಗಳ‌ ನಡುವಿನ ಸೌಹಾರ್ದಯುತ ಸಂಬಂಧದ ಕೊರತೆಯಿಂದ ಹೆಂಚು ಉತ್ಪಾದನೆ ಕಷ್ಟಕರವಾಗಿದೆ, ಜೊತೆಗೆ ಬೇಡಿಕೆಯೂ ಕುಸಿದಿದೆ. ಹೆಂಚಿನ ಮನೆ ತಂಪು ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು.

ಸಂಶೋಧನೆಗಳ ಮೂಲಕ ಕೆಲವು ಕಲಾತ್ಮಕ ಹೆಂಚುಗಳ ತಯಾರಿಕೆ ನಡೆಯುತ್ತಿದೆ‌. ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಕರಾವಳಿ ಭಾಗಗಳ ಬೇಡಿಕೆಯಲ್ಲಿ ಚೇತರಿಕೆ ಕಂಡಿದೆ. ಬೇಕಾದಷ್ಟು ಬಂಡವಾಳ, ಸರ್ಕಾರದ ಸಹಾಯ, ಕಾರ್ಮಿಕ ವರ್ಗ ಮತ್ತು ಉದ್ಯಮಿಗಳ ಸಹಕಾರ, ಜನರ ಇಚ್ಛಾಶಕ್ತಿ ಎಲ್ಲವೂ ಬೆರೆತರೆ ಹೆಂಚುಗಳು ಹಿಂದಿನ ಸುವರ್ಣ ಯುಗ ಕಾಣುವುದರಲ್ಲಿ ಸಂಶಯವಿಲ್ಲ.

Etiam euismod iaculis urna venenatis rutrum commodo enim. Vivamus tinci dunt leo vel arcu elnd pulvinar tellus.

2 comments

Leave A Reply